ನಮ್ಮ ರಾಜಕಾರಣಿಗಳು ಇಂದು ಪ್ರಜಾಪ್ರಭುತ್ವವನ್ನು ಸುಟ್ಟು ಹಾಕುತ್ತಿದ್ದಾರೆ!
ಚುನಾವಣೆ ಸಮಯದಲ್ಲಿ ಆಮೀಷವೆಂಬ ಸೀಮೆಎಣ್ಣೆ ಸುರಿದು ಪ್ರಚೋದನೆಯೆಂಬ ಬೆಂಕಿ ಹಚ್ಚಿ ಪ್ರಜೆಯ ಪ್ರಭುತ್ವವನ್ನು ದಹಿಸಿ ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡು ತಿಂದು ತೇಗುತ್ತಿದ್ದಾರೆ. ಅಧಿಕಾರ, ಕಾನೂನು, ಮತ್ತು ವ್ಯವಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಅವರೆದುರು ಬಡಪಾಯಿ ಪ್ರಜೆಗಳ ಪ್ರತಿಭಟನೆಯೆಂಬುದು ಅರಣ್ಯರೋದನವಾಗುತ್ತಿದೆ. ಕೂಗಿ ಕೂಗಿ ಸುಮ್ಮನಾಗುವುದೇ ಪ್ರಜೆಯ ಗತಿಯಾಗಿದೆ. ಭ್ರಷ್ಟ ರಾಜಕಾರಣಿಗಳು ಚುನಾವಣೆಯ ವೇಳೆ ಮತದಾರರೆದುರು ಜಗಭಂಡರಾಗಿ ನಿಂತು ಅದ್ಭುತವಾಗಿ ನಾಟಕ ವಾಡಿ ಮತ್ತು ಅಮಾಯಕ ಮತದಾರರನ್ನು ನಾನಾ ಆಮಿಷಗಳಿಗೆ ಬಲಿಯಾಗಿಸಿ ಗೆಲುವು ಸಾಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆಗೈದು ಅಧಿಕಾರಕ್ಕೇರುತ್ತಾರೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ನೋಡಿದೆವಲ್ಲ ಇವರ ನಾಟಕ, ಎಂಥ ಅದ್ಭುತ ವಾಗಿತ್ತು. ಬೇರೆ ಸಮಯದಲ್ಲಿ ಮೋಡಗಳ ಮಹಾ ಮಹಿಮರಂತಾಡುವ ಇವರು ಚುನಾವಣೆಯ ಸಂದರ್ಭದಲಿ ಧರೆಗಿಳಿದ ದಿವ್ಯತೇಜರ ಪೋಸು ಕೊಟ್ಟರು. ಜನಸಾಮಾನ್ಯರಿಂದ ದೂರವಾಗಿ ಸದಾಕಾಲ ದಂತಗೋಪುರಗಳಲ್ಲಿ ವಾಸಿಸುವ ಇವರು ಚುನಾವಣೆ ಘೋಷಿತವಾದ ಕೂಡಲೇ ಕೊಳೆ ಗೇರಿಗಳಿಗೆ ನುಗ್ಗಿ ಗುಡಿಸಲುಗಳ ಒಳ ಹೊಕ್ಕು ಬಡವರ ಸುಖ ಕಷ್ಟ ವಿಚಾರಿಸತೊಡಗಿದರು. ಮನೆಯಲ್ಲಿ ತಮ್ಮ ಮಕ್ಕಳನ್ನೇ ಎತ್ತಿಕೊಳ್ಳದವರು ಕೊಳಗೇರಿಯಲ್ಲಿ ಹಸುಗೂಸನ್ನು ಎತ್ತಿ ಮುದ್ದಾಡಿದರು.
ಸದಾ ಕಾಲ ಅಟ್ಟಹಾಸದಿಂದ ಮೆರೆಯುವ ಇವರು ಚುನಾವಣೆ ಪ್ರಚಾರದ ವೇಳೆ ಕಂಡ ಕಂಡ ವೃದ್ಧರ ಕಾಲುಗಳಿಗೆ ಬಿದ್ದರು. ಮನದೊಳಗೆ ಗಾಢವಾದ ಜಾತಿಭಾವವನ್ನು, ಮತiತ್ಸರವನ್ನು ಇಟ್ಟುಕೊಂಡು ಇವರು ಹೊರಗೆ ಜಾತ್ಯಾತೀತರ ಪೋಸು ಕೊಟ್ಟರು. ಮತೀಯ ಸೌಹಾರ್ದದ ಉಪದೇಶ ನೀಡಿದರು. ತಮ್ಮ ಕೋಮಿನ ಮಠ ಮಂದಿರ, ಮಸೀದಿ, ಚರ್ಚುಗಳಲ್ಲೇ ಜಾತಿ, ಉಪಜಾತಿ, ವರ್ಗ ಇತ್ಯಾದಿ ವಿಂಗಡಣೆ ಮಾಡುವ ಇವರು ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಎಲ್ಲ ಮಠ ಮಂದಿರ, ಮಸೀದಿ, ಚರ್ಚು ಎಲ್ಲವಕ್ಕೂ ಹೋಗಿ ಭಕ್ತಿಯ ಪರಾಕಾಷ್ಟೆಯನ್ನು ಮೆರೆದರು. ಈ ರಾಜಕಾರಣಿಗಳ ಚುನಾವಣಾ ಪ್ರಚಾರ, ಭಾಷಣ, ಆಹಾ ಅದು ಇನ್ನೊಂದು ಮಹಾ ನಾಟಕವಾಗಿತ್ತು. ಸುಳ್ಳು ಆವೇಶ, ಪೊಳ್ಳು ಭರವಸೆ ಮತ್ತು ಕಳ್ಳ ಕಣ್ಣೀರು ಹರಿಸಿದ ಇವರ ಆ ಅಭಿನಯ ಅತ್ಯದ್ಭುತವಾಗಿತ್ತು. ಆ ಅಭಿನಯವನ್ನು ನಿಜವೆಂದು ನಂಬಿದ ಮುಗ್ಧ ಮತದಾರನಿಗೆ ಮಕ್ಮಲ್ ಟೋಪಿ! ತನ್ಮೂಲಕ ಮತದ ಅಪಹರಣ, ಪ್ರಜಾಪ್ರಭುತ್ವದ ಕೊಲೆ. ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಈ ಪುಢಾರಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಾಗಲೀ ತಮ್ಮ ನಿರ್ದಿಷ್ಟ ಯೋಜನೆಗಳ ಬಗೆಗಾಗಲೀ ಜನರಿಗೆ ಏನಾದರೂ ಸ್ಪಷ್ಟ ಚಿತ್ರಣ ನೀಡಿದ್ದಾರೆಯೇ? ಇಲ್ಲವೇ ಇಲ್ಲ. ಸ್ವರ್ಗವನ್ನೇ ನಿಮ್ಮೆದುರು ತಂದಿಕ್ಕುತ್ತೇವೆಂದು ಒಂದು ಬುರುಡೆ ಒಗಾಯಿಸಿ ಮಿಕ್ಕಂತೆ ವಿರೋಧ ಪಕ್ಷಗಳ ಜನ್ಮ ಜಾಲಾಡುವುದರಲ್ಲೇ ಸಮಯ ಕಳೆದರು. ತಾನೆಂಥವನು, ತನ್ನ ಸಾಮರ್ಥ್ಯ ಎಂಥದು ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಬದಲು ಹೈಕಮಾಂಡ್‌ನ ಗುಣಗಾನದಲ್ಲೇ ಮುಳುಗಿದ್ದರು. ನಾವು ವೋಟು ಹಾಕಬೇಕಾದುದು ಈ ಅಭ್ಯರ್ಥಿಗೋ ಅಥವಾ ಸೋನಿಯಾ, ರಾಹುಲ್, ಅಡ್ವಾಣಿ, ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ ಇವರಲ್ಲೊಬ್ಬರಿಗೋ ಎಂದು ಒಮ್ಮೊಮ್ಮೆ ನಮಗೇ ಅನುಮಾನ ಬರುವಂತಾಯಿತು. ಇನ್ನು ಆ ಹೈಕಮಾಂಢ್ ವೀರರ ಭಾಷಣಗಳೋ ಅಧ್ವಾನವಾಗಿದ್ದವು. ಆವೇಶಭರಿತ ಕೆಸರೆರಚು ವಿಕೆ ಬಿಟ್ಟು ಆ ಭಾಷಣದಲ್ಲಿ ಇನ್ನೇನೂ ಇರಲಿಲ್ಲ.ತಮ್ಮ ವಿರೋಧಿಗಳನ್ನು ಜರಿಯುವ ಈ ಪುಢಾರಿಗಳ ಮಾತೆಲ್ಲ ನಿಜವೆಂದರೆ ಆಗ ಎಲ್ಲ ಪಕ್ಷಗಳ ಬಹುತೇಕ ರಾಜಕಾರಣಿಗಳೂ ಭ್ರಷ್ಟರು, ದುಷ್ಟರು, ವಂಚಕರು ಮತ್ತು ಅಪರಾಧ ಹಿನ್ನೆಲೆಯುಳ್ಳವರು. ಆದರೆ ಇವರು ಲೋಕಸಭೆ ಮತ್ತು ವಿಧಾನಸಭೆ ಸೇರುತ್ತಾರೆ. ಇದು ಪ್ರಜಾ ಪ್ರಭುತ್ವದ ಅಣಕವಲ್ಲದೇ ಮತ್ತೇನು? ಪ್ರಜಾಪ್ರಭುತ್ವ ವೆನ್ನುವದು ಈ ನಮ್ಮ ರಾಜಕಾರಣಿಗಳಿಗೆ ಆmದ ವಸ್ತುವಾಗಿದೆ. ನಾಟಕದ
ಡೈಲಾಗ್ ಆಗಿದೆ. ವೋಟಿನ ಸಾಧನವಾಗಿದೆ. ಸೀಟಿನ ಲೈಸೆನ್ಸ್ ಆಗಿದೆ.ಚುನಾವಣೆ ಬಂತೆಂದರೆ ಸಾಕು ಮತದಾರರನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ ಮತದಾರನಿಗೆ ಬೆನ್ನು ಹಾಕಿ ತಮ್ಮ ದಂತಗೋಪುರ ಗಳೆಡೆಗೆ ಹೊರಟು ಹೋಗುತ್ತಾರೆ. ರಾಜಕಾರಣಿ ಗಳೇನೋ ಇಂಥವರು ಆದರೆ ಮತದಾರರಾದ ನಾವೆಂಥವರು?ನಮ್ಮ ರಾಜಕಾರಣಿಗಳ ಗೋಸುಂಬೆತನವನ್ನು ಕಂಡಾಗ ನಮಗೆ ಅಸಹ್ಯವೆನಿಸುತ್ತದೆ. ಅವರ ಗೋಮುಖವ್ಯಾಘ್ರ ರೂಪವನ್ನು ಅರಿತಾಗ ಕೋಪ ಉಕ್ಕಿ ಬರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಅವರು, ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಸಿಹಿಮಾತಿನ ಕಲ್ಲು ಸಕ್ಕರೆ ಕೊಡಲು ನಮ್ಮ ಬಳಿಗೆ ಬಂದಾಗ ಅವರನ್ನು ಹೊಡೆದಟ್ಟಲು ಕಲ್ಲು ಸಿಕ್ಕರೆ ಕೊಳ್ಳಿರೋ ಎಂದೆನ್ನಬೇಕಿನಿಸುತ್ತದೆ. ಆದರೆ, ಚುನಾವಣೆಯ ದಿನ ಮತದಾನದ ನಮ್ಮ ಕರ್ತವ್ಯವನ್ನು ಮಾತ್ರ ನಾವದೆಷ್ಟೋ ಮಂದಿ ಪಾಲಿಸುವುದೇ ಇಲ್ಲ! ಅರ್ಧದಷ್ಟು ಜನ ಆ ದಿನ ಮತದಾನ ಮಾಡದೆ ಮನೆಯಲ್ಲೇ ಕುಳಿತುಕೊಳ್ಳುತ್ತೇವಲ್ಲಾ. ರಾಜಕಾರಣಿ ಗಳು ಮಾತ್ರವಲ್ಲ, ನಾವೂ ಸರಿಯಾಗಬೆಕಲ್ಲವೇ? ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅರ್ಧ ದಷ್ಟು ಮತದಾರರು ಮತದಾನ ಮಾಡಲಿಲ್ಲ. ಅಂದಮೇಲೆ, ಮತದಾರರಾದ ನಾವು ಅದೆಷು! ಬೇಜಾವಾಬ್ದಾರಿಯವರಾಗಿದ್ದೇವೆ ನೋಡಿ.ಮತದಾನ ಮಾಡದಿರುವವರಲ್ಲಿ ಸುಶಿಕ್ಷಿತರದೇ ಸಿಂಹಪಾಲು ಎಂಬುದು ನಾಚಿಕೆಗೇಡಿನ ವಿಷಯ ವಲ್ಲವೇ? ಅಕ್ಷರ ಜ್ಞಾನವಿಲ್ಲದವರು ಮತಗಟ್ಟೆಗೆ ಹೋಗಿ ಮತ ನೀಡುವಾಗ ಸುಶಿಕ್ಷಿತರಾದ ನಾವು ಮನೆಯಲ್ಲೇ ಉಳಿದರೆ ನಮಗೆ ಒಳ್ಳೆಯ ಆಡಳಿತ ದೊರೆಯುವುದಾದರೂ ಹೇಗೆ? ಅಶಿಕ್ಷಿತ ಮತದಾರರನ್ನು ಓಲೈಸಿ, ಹಣ, ಹೆಂಡ, ಉಡುಗೊರೆಗಳ ಆಮೀಷಕ್ಕೊಳಪಡಿಸಿ ಈ ನಮ್ಮ ರಾಜಕಾರಣಿಗಳು ದಾರಿ ತಪ್ಪಿಸಲೆತ್ನಿಸುವಾಗ ವಿದ್ಯಾವಂತ ನಾಗರೀಕರಾದ ನಾವು ಸ್ವಯಂ ಮತ ನೀಡುವುದಷ್ಟೇ ಅಲ್ಲ, ತಿಳುವಳಿಕೆಯಿಲ್ಲದ ಮುಗ್ಧರಿಗೆ ಸೂಕ್ತ ಮಾರ್ಗದರ್ಶನವನ್ನೂ ಮಾಡಬೇಕಲ್ಲವೇ? ಹಾಗಿರುವಾಗ ನಾವೇ ಮತನೀಡದೆ ಮನೆಯಲ್ಲಿ ಕುಳಿತರೆ, ಒಳ್ಳೆಯ ಆಡಳಿತ ಬರುವುದಾದರೂ ಹೇಗೆ? ಆ ಮೇಲೆ ಸರ್ಕಾರವನ್ನು ದೂರುವವರೂ ನಾವೇ ಅಲ್ಲವೇ?
ಯೋಗ್ಯರಿಲ್ಲವೆ ?ಬಹುತೇಕ ರಾಜಕಾರಣಿಗಳೆಲ್ಲರೂ ಅಯೋಗ್ಯರೇ ಆಗಿರುವಾಗ ಮತದಾನ ಮಾಡಿದರೆಷ್ಟು, ಬಿಟ್ಟರೆಷ್ಟು, ಎಂದು ಸಿಕರಂತೆ ಮಾತನಾಡುವ ವಿದ್ಯಾವಂತರು ಮತಗಟ್ಟೆಗಳಿಗೆ ಹೋಗಿ ಇದ್ದುದರಲ್ಲೇ ಯೋಗ್ಯರಿಗೆ ಮತ ನೀಡಿದರೆ ಫಲಿತಾಂಶ ಬೇರೆಯೇ ಆಗಬಹು ದಲ್ಲವೇ? ಇದ್ದುದರಲ್ಲೇ ಉತ್ತಮವಾಗಬಹುದಲ್ಲವೇ? ಯೋಗ್ಯನಾದ ಪಕ್ಷೇತರ ಅಭ್ಯರ್ಥಿಗೂ ನೀವು ಮತ ನೀಡಿ ಪ್ರೋತ್ಸಾಹಿಸಬಹುದಲ್ಲವೇ? ಮುಂದಿನ ಅಮೂಲಾಗ್ರ ಬದಲಾವಣೆಗೆ ಈ ನಿಮ್ಮ ಕ್ರಮವು ನಾಂದಿಯಾಗ ಬಹುದಲ್ಲವೇ? ವಿವಿಧ ಪಕ್ಷಗಳಿಗೆ ಚುರುಕು ಮುಟ್ಟಿಸಿದಂತಾಗಿ ಮುಂದಿನ ಸಲ ಆ ಪಕ್ಷಗಳು ಉತ್ತಮ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವುದಲ್ಲವೇ? ಹೀಗೆ ಆರಂಭವಾದ ಸಕಾರಾತ್ಮಕ ಬದಲಾವಣೆಯು ಕಾಲಕ್ರಮದಲ್ಲಿ ಪರಿಪೂರ್ಣ ತೆಯ ಹಂತವನ್ನು ತಲುಪುವುದು ನಿಶ್ಚಿತ. ಸುಶಿಕ್ಷಿತರಾದ ನಾವು ಮತದಾನ ಮಾಡದಿರು ವುದು ಮತ್ತು ಮತದಾನ ಮಾಡುವವರಲ್ಲಿ ಬಹುತೇಕರು ಸ್ವಜಾತಿ, ಸ್ವಮತ ಹಾಗೂ ನಿರ್ದಿಷ್ಟ ಪಕ್ಷದ ಒಲವಿನಿಂದ ಮತದಾನ ಮಾಡುವುದರಿಂದ ಎಷ್ಟೋ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಯೋಗ್ಯ ಅಭ್ಯರ್ಥಿಯೇ ಆಯ್ಕೆಯಾಗಿರುತ್ತಾನೆ.ವ್ಯವಸ್ಥೆಯಲ್ಲಿ ಬದಲಾವಣೆಯೆಂಬುದು ತಂತಾನೇ ಆಗುವಂಥದ್ದೂ ಅಲ್ಲ. ನಾವೇ ಪ್ರಯತ್ನ ಪೂರ್ವಕವಾಗಿ ಮಾಡಬೆಕಾದುದು ಅದು. ಅದು ದಿಢೀರನೆ ಆಗುವಂಥದೂ ಅಲ್ಲ. ಹಾಕಿಕೊಂಡ ಬಟ್ಟೆ ಬದಲಾಯಿಸಲೂ ನಮಗೆ ನಿಮಿಷಗಳ ಸಮಯ ಬೇಕಾಗುತ್ತದೆ. ಸುಶೀಕ್ಷಿತರ ಮತದಾನದ ಮೂಲಕ, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತ್ತು ಜಾತಿ, ಮತ, ಪಕ್ಷಗಳ ಒಲವನ್ನು ಮೀರಿ ಉತ್ತಮ ಅಭ್ಯರ್ಥಿಗೆ ಮತ ನೀಡುವ ಮೂಲಕ ಕಾಲಕ್ರಮದಲ್ಲಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ನಾವೇ ತರಬೇಕು. ಮತ್ತು ಇದು ನಮ್ಮಿಂದ ಖಂಡಿತ ಸಾಧ್ಯ. ಮತದಾರ ರಾದ ನಮಗೆ ನಂಬಿಕೆ ಬೇಕು, ತಾಳ್ಮೆ ಬೇಕು ಮತ್ತು ಮತದಾನದ ಕರ್ತವ್ಯ ಪ್ರಜ್ಞೆ ಬೇಕು ಅಷ್ಟೆ.